ದೀಪಿಕಾ ಪಡುಕೋಣೆ ತಲೆಗೆ ಹತ್ತು ಕೋಟಿ ಇನಾಮು, ಪದ್ಮಾವತಿ ವಿವಾದಕ್ಕೆ ತುಪ್ಪ ಸುರಿದರು ಬಿಜೆಪಿ ಲೀಡರ್

ಹರಿಯಾಣ : ಪದ್ಮಾವತಿ ಸಿನಿಮಾದ ವಿರುದ್ಧ ರಜಪೂತ ಸಮುದಾಯದ ಆಕ್ರೋಶ ಕಡಿಮೆಯಾದಂತೆ ತೋರುತ್ತಿಲ್ಲ. ಬಿಜೆಪಿಯ ಹಿರಿಯ ನಾಯಕರೊಬ್ಬರು ಈ ಕೆನ್ನಾಲಗೆಗೆ ತುಪ್ಪ ಸುರಿದಿದ್ದಾರೆ. ಅಲ್ಲದೆ, ನಟಿ ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್​ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆಗೆ ಹತ್ತು ಕೋಟಿಯ ಇನಾಮು ಘೋಷಿಸಿದ್ದಾರೆ.

ಹರಿಯಾಣ ಬಿಜೆಪಿ ಘಟಕದ ಮಾಧ್ಯಮ ಉಸ್ತುವಾರಿ ಸೂರಜ್ ಪಾಲ್ ಅಮು, ನಟಿ ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್​​ ಮತ್ತು ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಮೂವರ ತಲೆಗೆ ಹತ್ತು ಕೋಟಿ ರೂಪಾಯಿ ಬೆಲೆ ಕಟ್ಟಿದ್ದಾರೆ. ಯಾರಾದರೂ ಇವರ ತಲೆ ಕಡಿದು ತಂದರೆ ಹತ್ತು ಕೋಟಿ ರೂಪಾಯಿ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಆ ಕೃತ್ಯ ಎಸಗುವವರ ಕುಟುಂಬವನ್ನು ನೋಡಿಕೊಳ್ಳುತ್ತೇವೆ ಎಂದೂ ಘರ್ಜಿಸಿದ್ದಾರೆ.

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಪದ್ಮಾವತಿ ಸಿನಿಮಾದ ಬೆಂಬಲಕ್ಕೆ ನಿಂತಿರುವ ರಣವೀರ್ ಸಿಂಗ್ ವಿರುದ್ಧ ಗುಡುಗಿದ ಸೂರಜ್ ಪಾಲ್ ಅಮು, ನಿಮ್ಮ ಕಾಲು ಮುರಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ದೀಪಿಕಾ ಪಡುಕೋಣೆ ಮತ್ತು ಬನ್ಸಾಲಿ ತಲೆಗೆ ಬೆಲೆ ಕಟ್ಟಿರುವ ಮೀರತ್​ನ ಯುವಕನಿಗೆ ಸೂರಜ್ ಪಾಲ್ ಅಮು ಶಹಬ್ಬಾಸ್​ಗಿರಿ ನೀಡಿದ್ದಾರೆ.

ಪದ್ಮಾವತಿ ಹಿಂದಿ ಚಿತ್ರದಲ್ಲಿ ಇತಿಹಾಸ ತಿರುಚುವ ಯತ್ನವಾಗಿದೆ. ದೆಹಲಿ ಸುಲ್ತಾನ್ ಅಲ್ಲಾವುದಿನ್ ಕಿಲ್ಜಿ ಮತ್ತು ರಾಜಪೂತ ರಾಣಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ರಜಪೂತ ಸಮುದಾಯ ಚಿತ್ರದ ವಿರುದ್ಧ ರೊಚ್ಚಿಗೆದ್ದಿದೆ.

Leave a Reply

error: Content is protected !!